ನಗು -
ನಗು ಮಾನವರಿಗೇ ಮೀಸಲಾದ ಚರ್ಯೆಯೋ ಇತರ ಪ್ರಾಣಿಗಳಲ್ಲೂ ಕಂಡುಬರುವುದೋ ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿವೆ. ಯಾವ ಸಂದರ್ಭದಲ್ಲಿ, ಏತಕ್ಕಾಗಿ ನಗುವಿನ ಪ್ರತಿಕ್ರಿಯೆಯುಂಟಾಗುವುದು ಎಂಬ ಸಮಸ್ಯೆ ಮನಶ್ಯಾಸ್ತ್ರಜ್ಞರ ಗಮನವನ್ನು ಸೆಳೆದಿದೆ.

ಪ್ರಾಣಿಗಳ ಪ್ರತಿಯೊಂದು ಚರ್ಯೆಯೂ ಒಂದೊಂದು ಮನಃಪ್ರವೃತ್ತಿಗೆ ಸೇರಿರುತ್ತದೆ. ಮನಃಶ್ಶಾಸ್ತ್ರಜ್ಞರಲ್ಲಿ ಕೆಲವರು ನಗು ಹುಟ್ಟುಗುಣಗಳ ಗುಂಪಿಗೆ ಸೇರಿದೆಯೆಂದೂ ಇತರರು ಭಾವಗಳ ಗುಂಪಿಗೆ ಸೇರಿದೆಯೆಂದೂ ಅಭಿಪ್ರಾಯ ಪಟ್ಟಿದ್ದಾರೆ. ನಗು ನೇರವಾಗಿ ಹೀಗೆ ವಿಭಾಗಿಸಿ ಹೇಳುವುದು ಕಷ್ಟವಾದರೂ ಭಾವಗಳ ಜೊತೆ ಇದಕ್ಕೆ ನಿಕಟವಾದ ಸಂಪರ್ಕವಿದೆ ಎಂದು ಹೇಳಬಹುದು. ಅಂದರೆ ಸಂತೋಷ, ಭಯ, ಕೋಪ ಮುಂತಾದ ಭಾವಗಳು ಪ್ರಚೋದಿತವಾದಾಗ ಅನೇಕ ವೇಳೆ ಅವುಗಳ ಜೊತೆ ನಗುವಿನ ಪ್ರತಿಕ್ರಿಯೆಯನ್ನೂ ಕಾಣಬಹುದು.

ನಗು ಯಾವ ರೀತಿ ಹುಟ್ಟಿ ಬೆಳೆಯುತ್ತದೆ, ಅದನ್ನು ಪ್ರಚೋದಿಸುವ ಸಂದರ್ಭಗಳಾವುವು, ಜೀವನದಲ್ಲಿ ಅದರ ಪಾತ್ರವೇನು-ಎಂಬ ಅಂಶಗಳನ್ನೂ ಇಲ್ಲಿ ಪ್ರಸ್ತಾಪಿಸಲಾಗಿದೆ.

ನಗುವಿನ ಹುಟ್ಟು ಮತ್ತು ಬೆಳವಣಿಗೆ: ಮಕ್ಕಳ ಮಾನಸಿಕ ಬೆಳವಣಿಗೆಯನ್ನು ವಿವರವಾಗಿ ಅಧ್ಯಯಿಸಿರುವ ಮನಶ್ಶಾಸ್ತ್ರಜ್ಞರು ಹುಟ್ಟಿದಂದಿನಿಂದ ಮಕ್ಕಳ ಚಲನವಲನಗಳನ್ನು ವೀಕ್ಷಿಸಿ, ನಗು ಯಾವಾಗ ವ್ಯಕ್ತವಾಗುವುದು ಎಂಬುದನ್ನು ಸೂಚಿಸಿದ್ದಾರೆ. ಹುಟ್ಟಿದ 2-3 ವಾರಗಳಲ್ಲಿ ಮಕ್ಕಳು ಹಾಲು ಕುಡಿದು ತೃಪ್ತಿಹೊಂದಿದಾಗಲೂ ಮೆತ್ತನೆಯ ಬೆಚ್ಚಗಿರುವ ಬಟ್ಟೆಯಿಂದ ಉಂಟಾಗುವ ದೈಹಿಕ ತೃಪ್ತಿಯಿಂದಲೂ, 5-6 ವಾರಗಳಲ್ಲಿ ತಾಯಿಯನ್ನು ಕಂಡಾಗಲೂ 10-11 ವಾರಗಳಲ್ಲಿ ತಾಯಿ ನಕ್ಕಾಗ ಅದಕ್ಕೆ ಪ್ರತಿಕ್ರಿಯೆ ಯಾಗಿಯೂ 11-12 ವಾರಗಳಲ್ಲಿ ಮಿರುಗುವ ಬಣ್ಣಬಣ್ಣದ ಸಾಮಾನುಗಳನ್ನು ಕಂಡಾಗಲೂ ಮುಗುಳುನಗುತ್ತದೆ. 14 ವಾರದ ಮಕ್ಕಳಿಗೆ ಕಚಗುಳಿ ಇಟ್ಟಾಗ, ಅಂಗಾಲು ಮುಂತಾದ ಜಾಗಗಳನ್ನು ಮೃದುವಾಗಿ ಸ್ಪರ್ಶಿಸಿದಾಗ ಹಿಂದಕ್ಕೂ ಮುಂದಕ್ಕೂ ತೂಗಾಡಿಸಿದಾಗ, 16 ವಾರಗಳಲ್ಲಿ ಮಗುವಿನ ಮುಂದೆ ನಾವು ನಮ್ಮ ಮುಖಕ್ಕೆ ಒಂದು ಬಟ್ಟೆಯನ್ನು ಮುಸುಕು ಹಾಕಿಕೊಂಡು ಕೂಡಲೇ ಅದನ್ನು ತೆಗೆದಾಗ, ಮಗುವಿನ ಮುಂದೆ ಕಾಗದವನ್ನು ಪರಪರ ಶಬ್ದವಾಗುವಂತೆ ಹರಿದಾಗ, 24 ವಾರಗಳಲ್ಲಿ ಮಗುವನ್ನು ಕೈಯಲ್ಲಿ ಹಿಡಿದು ಮೇಲಕ್ಕೆ ಹಾರಿಸಿ ಕೆಳಗೆ ಬರುವಾಗ ಆತುಕೊಂಡಾಗ ಮಕ್ಕಳು ಮೊದಲಲ್ಲಿ ಸ್ವಲ್ಪ ಭಯಗೊಂಡರೂ ಇದರಿಂದ ತಮಗೆ ಯಾವ ಅಪಾಯವಿಲ್ಲದಿರುವುದನ್ನು ಗಮನಿಸಿದ ಕೆಲವು ಕ್ಷಣಗಳಲ್ಲಿಯೇ ಕೇಕೆಹಾಕಿ ನಗುತ್ತವೆ. ಇದೇ ರೀತಿ ಪುನಃಪುನಃ ಮಾಡಿದಾಗ ಒಂದು ಸಲದಿಂದ ಇನ್ನೊಂದು ಸಲಕ್ಕೆ ನಗುವೂ ಜೋರಾಗುತ್ತದೆ. ಮಗುವಿಗೆ ವಯಸ್ಸಾದಂತೆಲ್ಲ ನಗುವನ್ನು ಪ್ರೇರಿಸುವ ಸನ್ನಿವೇಶಗಳೂ ಹೆಚ್ಚುತ್ತವೆ. 1-1.5 ವರ್ಷದ ಮಕ್ಕಳು ತಾವೇ ಯಾವುದಾದರೂ ಕೆಲಸವನ್ನು ಮಾಡಿದಾಗ ಉತ್ಸಾಹಪೂರಿತ ಹೆಮ್ಮೆಯ ನಗುವನ್ನು ಹೊರಸೂಸುತ್ತವೆ. ಆಟವಾಡುವಾಗ ನಗುವೂ ಅವಕ್ಕೆ ಆಟದಲ್ಲೊಂದು ಮುಖ್ಯ ಅಂಶವಾಗಿರುತ್ತದೆ. ತಂದೆತಾಯಿಯರು ಕೋಪಗೊಂಡಾಗ ಅವು ತಾವು ನಕ್ಕು ಅವರ ಕೋಪವನ್ನು ಹೋಗಲಾಡಿಸಲೆತ್ನಿಸುತ್ತವೆ. 3 ವರ್ಷ ಮತ್ತು ಅದಕ್ಕೆ ಮೇಲ್ಪಟ್ಟ ಮಕ್ಕಳು ಇತರರ ಮಾತಿನ ಅಥವಾ ಸಂದರ್ಭಗಳ ಅಸಂಬದ್ಧತೆಯನ್ನು ತಮ್ಮ ಗ್ರಹಿಕೆಗೆ ತಕ್ಕಂತೆ ಕಂಡುಹಿಡಿದಾಗಲೂ ತಾವು ಮಾಡಿದ ಕೆಲಸ ತಪ್ಪು ಎಂದು ಗ್ರಹಿಸಿದಾಗಲೂ ಒಬ್ಬರಿಗೆ ತಿಳಿಯದಂತೆ ಮತ್ತೊಬ್ಬರು ಆಕಸ್ಮಿಕವಾಗಿ ಏಕಕಾಲದಲ್ಲಿ ಒಂದೇ ಮಾತಾಡುವುದು, ಒಂದೇ ಕಾರ್ಯದತ್ತ ಇಬ್ಬರೂ ಏಕಕಾಲದಲ್ಲಿ ಮುನ್ನುಗ್ಗಿ ಆಕಸ್ಮಿಕವಾಗಿ ಸಂಧಿಸಿದಾಗಲೂ ನಗುತ್ತವೆ. ಮಕ್ಕಳು ಬೆಳೆದಂತೆಲ್ಲ ಇದೇ ರೀತಿ ನಗುವನ್ನು ಪ್ರಚೋದಿಸುವ ಸಂದರ್ಭಗಳೂ ಬೆಳೆಯುತ್ತವೆ. ಮಕ್ಕಳು ಚಿಕ್ಕಂದಿನಿಂದ ಕಾಲಕಾಲಕ್ಕೆ ಸೂಕ್ತರೀತಿಯ ನಗುವಿನ ಪ್ರತಿಕ್ರಿಯೆಯನ್ನು ವ್ಯಕ್ತಮಾಡುವುದರಿಂದ ಅವುಗಳ ರಾಗಭಾವಗಳ ಬೆಳವಣಿಗೆ, ಅದಕ್ಕಿಂತ ಮಿಗಿಲಾಗಿ ಅವುಗಳ ಸಾಮಾಜಿಕ ಬೆಳವಣಿಗೆ ಸುಗಮವಾಗಿ ಸಾಗುತ್ತಿದೆ ಎಂದು ನಾವು ತಿಳಿಯಬಹುದು.
ನಗುವನ್ನು ಪ್ರಚೋದಿಸುವ ಸಂದರ್ಭಗಳು: ಹರ್ಷದ ನಗೆ, ವಿನೋದದ ನಗೆ, ವ್ಯಂಗ್ಯ ನಗೆ, ತಿರಸ್ಕಾರದ ನಗೆ, ದೌರ್ಬಲ್ಯದ ನಗೆ ಮುಂತಾದ ನಾನಾ ಬಗೆಯ ನಗೆಗಳಿವೆಯಾಗಿ ನಗೆಯನ್ನು ಒಂದೇ ಒಂದು ಪ್ರಚೋದನಾಸೂತ್ರಕ್ಕೆ ಅಳವಡಿಸುವುದು ಅಸಾಧ್ಯ.

ವಿನೋದದ ಸನ್ನಿವೇಶಗಳು ನಗುವಿಗೆ ಪ್ರಚೋದಕ ಎಂಬುದು ಜನಸಾಮಾನ್ಯರಿಗೂ ತಿಳಿದ ವಿಷಯ. ಅಂದರೆ ಯಾವುದೇ ಹಾಸ್ಯಪೂರಿತ ಘಟನೆ ನಗುವನ್ನು ಪ್ರಚೋದಿಸುತ್ತದೆ. ಕೆಲವು ವೇಳೆ ವಿನೋದದ ಸನ್ನಿವೇಶಗಳಾವುವೂ ಇರದಿದ್ದರೂ ನಗೆಯ ಪ್ರತಿಕ್ರಿಯೆಯನ್ನು ಕಾಣಬಹುದು. ನಮ್ಮ ಸಂತೋಷವನ್ನು ಸೂಚಿಸಲು ನಗುತ್ತೇವೆ. ಯಾವುದಾದರೊಂದು ಮಹತ್ಕಾರ್ಯವನ್ನು ಅತಿಪ್ರಯಾಸಪಟ್ಟು ಸಾಧಿಸಿದಾಗ ಉಂಟಾಗುವ ತೃಪ್ತಿ ಸಂತೋಷವೇ ನಗುವಿನ ಪ್ರೇರಕವೆಂದು ಒಂದು ವಾದವಾದರೆ, ಅಚಿಂತಿತವಾಗಿ ಆಕಸ್ಮಿಕವಾಗಿ ದೊರಕುವ ಕೀರ್ತಿಗೌರವಗಳಿಂದುಂಟಾಗುವ ಸಂತೋಷ ಮತ್ತು ಮೇಲ್ಮೆಯ ಪ್ರತಿಕ್ರಿಯೆಯಾಗಿ ನಗು ಹೊರಹೊಮ್ಮುವುದೆಂದು ಇನ್ನೊಂದು ವಾದ (ಹಾಬ್ಸ್). ಸಂತೋಷ ಭಾವ ಮಾತ್ರವಲ್ಲದೆ ಅನೇಕ ವೇಳೆ ಕೋಪ ಭಯ ಸಹಾನುಭೂತಿ ಮುಂತಾದ ಭಾವಗಳೂ ನಗುವಿಗೆ ಎಡೆಮಾಡಿಕೊಡುತ್ತವೆ. ಹೇಗೆಂದರೆ ಹಿರಿಯ ಅಧಿಕಾರಿಗಳ ಅಥವಾ ಪರೀಕ್ಷಕರ ತಂಡವನ್ನು ಸಂದರ್ಶಿಸಬೇಕಾದ ಪರಿಸ್ಥಿತಿಯಲ್ಲಿ ಅವರ ಬಗ್ಗೆ ನಮಗಿರುವ ಭಯವನ್ನು ತೋರ್ಪಡಿಸಲು ಬೇರಾವ ದಾರಿಯಿಲ್ಲದೆ ಅವರನ್ನು ಕಂಡಕೂಡಲೇ ಒಂದು ರೀತಿಯ ದೌರ್ಬಲ್ಯದ ನಗೆಯನ್ನು ಬೀರುತ್ತೇವೆ. ಈ ನಗೆ ಖಂಡಿತ ಸಂತೋಷದ ಚಿಹ್ನೆಯಲ್ಲವೆಂದು ನಾವು ಮನಗಂಡಿದ್ದರೂ ಪರಿಸ್ಥಿತಿಯ ಸೆಳೆತದಿಂದಾಗಿ ನಗಲು ಯತ್ನಿಸುತ್ತೇವೆ. ಇದೇ ರೀತಿ ಹಿರಿಯ ಅಧಿಕಾರಿ ಅಥವಾ ಇತರರ ಮೇಲೆ ಅತ್ಯಂತ ಕೋಪಗೊಂಡಿದ್ದರೂ ಅದನ್ನು ವ್ಯಕ್ತಮಾಡಲು ಮಾರ್ಗವಿಲ್ಲದೆ ಇದ್ದಾಗ ಆ ಕೋಪ ಒಂದು ಬಗೆಯ ನಗುವಿನಲ್ಲಿ ಅಂತ್ಯಗೊಳ್ಳುತ್ತದೆ.

ಯಾರಾದರೂ ಬೀದಿಯಲ್ಲಿ ಕಾಲುಜಾರಿ ಬಿದ್ದಾಗ ಅದನ್ನು ನೋಡಿದವರು ಸಾಧಾರಣವಾಗಿ ಪಕ್ಕನೆ ನಗುತ್ತಾರೆ. ಈ ನಗುವಿಗೆ ಕಾರಣವೇನು ಎಂಬುದರ ಬಗ್ಗೆ ಕೆಲವು ವಾದಗಳಿವೆ. ಅವು ಯಾವುವೆಂದರೆ: (ಎ) ಕಾಲುಜಾರಿ ಬೀಳುವ ಪ್ರಸಂಗ ವಿನೋದಕರವಾಗಿರುವುದರಿಂದ; (ಬಿ) ಜಾರಿಬಿದ್ದವರ ದುರ್ದೆಶೆಯನ್ನು ನೋಡಿ ಮರುಗಿ, ಕನಿಕರಿಸಿ ಆ ಸಹಾನುಭೂತಿಯಿಂದ ನೋಡಿದವರಲ್ಲಿ ಉಂಟಾಗುವ ಒಂದು ಬಗೆಯ ಮೂಕವೇದನೆಯನ್ನು ನಿವಾರಿಸಿಕೊಳ್ಳುವ ಸಲುವಾಗಿ; (ಸಿ) ಇತರರ ದುರ್ದೆಶೆಗಳನ್ನು ಪರಿಗಣಿಸಿದಾಗ ಅವರಿಗಿಂತ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ ಎಂಬ ಅಂಶ ನಮ್ಮ ಮನಸ್ಸಿನಲ್ಲಿ ಮೂಡಿ ಅದನ್ನು ಸೂಚಿಸುವ ಸಲುವಾಗಿ, ನಮ್ಮ ಪ್ರಾಧಾನ್ಯ, ಹೆಚ್ಚಳ, ಮೇಲ್ಮೆಗಳನ್ನು ಸ್ಥಾಪಿಸುವ ಸಲುವಾಗಿಯೇ ನಗುತ್ತೇವೆ ಎಂದು ಒಂದು ವಾದ (ಆ್ಯಡ್ಲರ್). ಆದರೆ ಇತರರ ತಪ್ಪು ಮತ್ತು ದುರ್ದೆಶೆಗಳು ಮಾತ್ರವೇ ನಮ್ಮ ನಗುವಿಗೆ ಪ್ರೇರಕವಲ್ಲದೆ ಅನೇಕ ವೇಳೆ ನಮ್ಮ ತಪ್ಪು, ನಮ್ಮ ದುರ್ದೆಶೆಗಳನ್ನೇ ಕುರಿತದ್ದಾಗಿರುವುದು ಎಂದು ಇನ್ನೊಂದು ವಾದ (ಎಂ.ವಿ.ಗೋಪಾಲಸ್ವಾಮಿ).

ಆರೋಗ್ಯವಾಗಿ ದೃಢಕಾಯರಾಗಿರುವವರಲ್ಲಿನ ಹೆಚ್ಚಿನ ನರಗಳ ಶಕ್ತಿ ಕೆಲವೊಮ್ಮೆ ಪ್ರೇರಕವಾಗಿ ನಗುವಿನ ಮೂಲಕ ಹೊರಹೊಮ್ಮುವುದು ಎಂದು ಒಂದು ವಾದ (ಸ್ಪೆನ್ಸರ್)

ನಮ್ಮ ಆಶ್ಲೀಲ ಹಾಗೂ ವೈರದ ಭಾವನೆಗಳು ನಗುವಿನ ಮೂಲಕ ತೃಪ್ತಿ ಹೊಂದುತ್ತವೆ ಎಂದು ಮನೋವಿಶ್ಲೇಷಕರೊಬ್ಬರ ಅಭಿಪ್ರಾಯ (ಫ್ರಾಯ್ಡ್). ಹೇಗೆಂದರೆ ನಮ್ಮ ದುರುದ್ದೇಶ, ಮತ್ಸರ, ವೈರ, ಅನುಚಿತ, ಆಶ್ಲೀಲ ಭಾವನೆಗಳನ್ನು ಇತರರೊಡನೆ ನೇರವಾಗಿ ವ್ಯಕ್ತಮಾಡುವುದನ್ನು ಸಮಾಜ ನಿಷೇಧಿಸುತ್ತದೆ. ಹಾಗಾಗಿ ಅವು ಅತೃಪ್ತ ಬಯಕೆಗಳಾಗಿಯೇ ಉಳಿಯುತ್ತವೆ. ಅಲ್ಲದೆ ಮನಸ್ಸಿನ ಆತಂಕ, ಕಳವಳಗಳನ್ನು ಹೆಚ್ಚಿಸುತ್ತವೆ. ಅಂಥ ಸಂದರ್ಭಗಳಲ್ಲಿ ಮನಸ್ಸಿನ ಆಳದಲ್ಲಿರುವ ಭಾವಗಳನ್ನು ನಗುವಿನ ಮೂಲಕ ಹೊರಗೆಡವಿದಾಗ ಮನಸ್ಸು ಹಗುರವಾಗುತ್ತದೆ.

ನಗೆಗೆ ಒಂದೇ ಒಂದು ಗುಣಲಕ್ಷಣವನ್ನು ಹೇಳುವುದು ಅಸಾಧ್ಯವಾದರೂ ಅದರ ಬಗ್ಗೆ ಇರುವ ಎಲ್ಲ ಸೂತ್ರಗಳೂ ನಗೆಯ ಒಂದೊಂದು ಬಗೆಯನ್ನು ಸೂಚಿಸುತ್ತವೆ. ಒಟ್ಟಿನಲ್ಲಿ ಹೇಳುವುದಾದರೆ ನಗೆಗೆ ನಾನಾ ಸಂದರ್ಭಗಳೂ ಕಾರಣಗಳೂ ಪ್ರೇರಕವಾಗಿವೆ. ಹಾಸ್ಯಕರ ಸನ್ನಿವೇಶ ಹಾಸ್ಯದ ನಗೆಗೂ ಸಂತೋಷಕರ ಸನ್ನಿವೇಶ ಸಂತೋಷದ ನಗೆಗೂ ಎಡೆಮಾಡಿಕೊಡುತ್ತದೆ. ಇದೇ ರೀತಿ ಅಣಕ ಅಥವಾ ವ್ಯಂಗ್ಯ ನಗೆ, ತಿರಸ್ಕಾರ ಮತ್ತು ಮೂದಲಿಕೆಯ ನಗೆ, ದೌರ್ಬಲ್ಯಸೂಚಕ ನಗೆ, ಸಮ್ಮತಿ-ಅಸಮ್ಮತಿ ಸೂಚಿಸುವ ನಗೆ, ಮೇಲ್ಮೆ ಮತ್ತು ಹೆಚ್ಚಳವನ್ನು ಪ್ರದರ್ಶಿಸುವ ಜಂಬದ ನಗೆ, ದಯೆ ಅಥವಾ ಕರುಣೆಯ ನಗೆ, ಪರಿಚಿತ ಮತ್ತು ಅಪರಿಚಿತ ಅತಿಥಿಗಳನ್ನು ಸ್ವಾಗತಿಸುವ ನಗೆ, ಇತರರನ್ನು ಅನುಕರಿಸುವ ನಗೆ, ಅಧಿಕಾರದ ನಗೆ, ಇತರರ ಗಮನ ಸೆಳೆಯುವ ನಗೆ, ಅಸಂಬದ್ಧ ಸನ್ನಿವೇಶದಿಂದ ಪ್ರೇರಿತವಾದ ನಗೆ, ಮನಸ್ಸಿನ ಕಳವಳ, ಭಯ, ದ್ವೇಷ ಇತ್ಯಾದಿ ಭಾವನೆಗಳನ್ನು ಮುಚ್ಚುವ ಸಲುವಾಗಿ ಒಣನಗೆ, ಮನಸ್ಸಿಗೆ ಬೇಡದಿದ್ದರೂ ಪರಿಸ್ಥಿತಿಯ ಸೆಳೆತಕ್ಕೆ ಒಳಪಟ್ಟ ಒಣನಗೆ, ನಗೆಯ ನಟನೆ, ಅಕಾರಣವಾಗಿ ನಗುವ ಮನೋವಿಕಾರಕ್ಕೆ ಒಳಪಟ್ಟವರ ಅವಾಸ್ತವಿಕ ಪ್ರಪಂಚಕ್ಕೆ ಸಂಬಂಧಿಸಿದ ಹುಚ್ಚುನಗೆ- ಇತ್ಯಾದಿಗಳೂ ಸಂದರ್ಭಾನುಚಿತವಾಗಿ ನಮ್ಮ ದಿನಚರಿಯ ನಾನಾ ನಡತೆಗಳೊಡನೆ ಹಾಸುಹೊಕ್ಕಾಗಿ ಬೆರೆತಿವೆ.

ನಗೆಯ ಪ್ರತಿಕ್ರಿಯೆ ಎಲ್ಲರಲ್ಲೂ ಏಕರೀತಿಯಾಗಿರುವುದಿಲ್ಲ. ಕೆಲವು ಬಗೆಯ ನಗೆಯ ಪ್ರತಿಕ್ರಿಯೆಗಳೆಂದರೆ: ಹಸನ್ಮುಖ, ಮುಗುಳ್ನಗೆ, ಹಲ್ಲುಗಳನ್ನು ಪ್ರದರ್ಶಿಸುವ ನಗೆ, ಶಬ್ದಮಾಡಿ ಇಡೀ ದೇಹವನ್ನು ಕುಲುಕಿಸುತ್ತಾ ನಗುವ ನಗೆ ಇತ್ಯಾದಿ. ಒಂದೇ ಸಂದರ್ಭದ ಪ್ರತಿಕ್ರಿಯೆಯಾಗಿ ಒಬ್ಬೊಬ್ಬರಲ್ಲೂ ಬೇರೆ ಬೇರೆ ರೀತಿಯ ನಗೆಯನ್ನೂ ಅನೇಕ ಸಂದರ್ಭಗಳಲ್ಲಿ ಒಂದೇ ರೀತಿಯ ನಗೆಯನ್ನು ಪ್ರತಿಕ್ರಿಯೆಯಾಗಿ ಕಾಣಬಹುದು ಅಥವಾ ಒಂದು ಸಂದರ್ಭದಲ್ಲಿ ನಗೆಯ ಪ್ರತಿಕ್ರಿಯೆ ಮುಗುಳ್ನಗೆಯಿಂದ ಪ್ರಾರಂಭವಾಗಿ ಜೋರಾದ ನಗೆಯಲ್ಲಿ ಅಂತ್ಯಗೊಳ್ಳಬಹುದು ಅಥವಾ ಜೋರಾದ ನಗೆಯಿಂದ ಮೊದಲಾಗಿ ಮುಗುಳ್ನಗೆಯಲ್ಲಿ ಮುಕ್ತಾಯ ಹೊಂದಬಹುದು. ಮುಗುಳ್ನಗೆ ಸುಂದರವಾದುದೆಂದೂ ಜೋರಾದ, ಹಲ್ಲುಗಳನ್ನು ಪ್ರದರ್ಶಿಸುವ ನಗೆ ಕುರೂಪದ್ದೆಂದೂ ಒಂದು ಅಭಿಪ್ರಾಯ (ಮೆಕ್‍ಡುಗಲ್).

ಮಾನವನ ಇತರ ವರ್ತನೆಗಳಂತೆ ನಗುವೂ ಯಾವಾಗ, ಎಲ್ಲಿ, ಹೇಗೆ ಪ್ರತಿಕ್ರಿಯೆಗೊಳ್ಳಬಹುದು ಎಂಬ ಅಂಶ ಆಯಾ ಜನರ ಸಮಾಜದ ಕಟ್ಟುಪಾಡುಗಳನ್ನು ಅವಲಂಬಿಸಿರುತ್ತದೆ. ಜನಾಂಗದವರಲ್ಲಿ ನಗೆ ಪ್ರಚೋದಿಸುವ ಸಂದರ್ಭ ಮತ್ತೊಂದು ಜನಾಂಗದಲ್ಲಿ ನಗೆಯನ್ನು ಪ್ರಚೋದಿಸದಿರಬಹುದು. ಆದ್ದರಿಂದ ಅವರಲ್ಲಿ ಹಾಸ್ಯಪ್ರವೃತ್ತಿಯ ಕೊರತೆ ಇದೆ ಎಂದು ಭಾವಿಸುವುದು ತಪ್ಪಾಗುವುದು.

ಜೀವನದಲ್ಲಿ ನಗುವಿನ ಪಾತ್ರ: ನಗು ದುಃಖಕ್ಕೆ ಪ್ರತ್ಯೌಷಧವೆಂದೂ ಅಳುವುದನ್ನು ತಪ್ಪಿಸಲು ನಗು ಎಂದೂ ಹೇಳುವುದಿದೆ. ನಗು ಕಷ್ಟಕಾರ್ಪಣ್ಯಗಳನ್ನು ಎದುರಿಸಿ ಜೀವನವನ್ನು ಸುಗಮವಾಗಿ ಮಾಡಬಲ್ಲದು. ನಗೆಯನ್ನು ನಮ್ಮ ಕಳವಳ, ಕೋಪ, ಭಯ ಮುಂತಾದ ಭಾವಗಳ ಪ್ರತಿನಿಧಿ ಎನ್ನಬಹುದು. ಹೇಗೆಂದರೆ ನಮ್ಮ ಈ ಭಾವಗಳನ್ನು ನೇರವಾಗಿ ಅಲ್ಲದಿದ್ದರೂ ನಗೆಯ ಮೂಲಕ ಸೂಚಿಸಬಹುದು. ಕೆಲವು ಸಲ ಈ ಭಾವಗಳನ್ನು ಇತರರಿಗೆ ತಿಳಿಸಲಿಚ್ಛೆಯಿಲ್ಲದಿರುವಾಗ ನಗೆಯ ಸೋಗಿನಲ್ಲಿ ಅವನ್ನು ನಮ್ಮಲ್ಲಿಯೇ ಹುದುಗಿಸಿಕೊಂಡು ಇತರರಿಂದ ಮರೆಮಾಚಬಹುದು. ಕೆಲವೊಮ್ಮೆ ನಾವು ಕೋಪಾವಿಷ್ಟರಾದಾಗ, ಮನಸ್ಸು ಬಹಳ ದುಃಖದಿಂದ ಕೂಡಿದಾಗ, ಅಥವಾ ನಾವು ಭಯಗೊಂಡಾಗ ನಗೆ ರಕ್ಷಾಕವಚದಂತೆ ಪರಿಸ್ಥಿತಿಯನ್ನೆದುರಿಸಲು ಸಹಕಾರಿಯಾಗುತ್ತದೆ. ನಮ್ಮ ದುರ್ದಶೆ, ಕಷ್ಟಕಾರ್ಪಣ್ಯಗಳನ್ನು ಕುರಿತು, ಪರಿತಪಿಸಿ, ಕಣ್ಣೀರಿಟ್ಟು ಯಾವ ಕೆಲಸದಲ್ಲೂ ಪ್ರವೃತ್ತರಾಗುವ ಅಭಿಲಾಷೆಯನ್ನೇ ಕಳೆದುಕೊಂಡು ಚಿಂತಿಸುವ ಬದಲು, ನಮ್ಮ ತಪ್ಪು, ದುರ್ದೆಶೆಗಳತ್ತ ನಾವೇ ನಗುವ ಪ್ರವೃತ್ತಿಯನ್ನು ಬೆಳೆಸಿಕೊಂಡಲ್ಲಿ, ಜೀವನದಲ್ಲಿ ನಿರಾಶಾವಾದಿಗಳಾಗುವುದು ತಪ್ಪುತ್ತದೆ. ಮಾನಸಿಕ ಆರೋಗ್ಯವನ್ನು ಉತ್ತಮ ಮಟ್ಟದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.

ಸಂಘಜೀವನದಲ್ಲಿ ನಗುವಿನ ಪಾತ್ರ ಮುಖ್ಯವಾದುದು. ನಾವು ಏಕಾಂಗಿಯಾಗಿದ್ದಾಗ ನಗುವುದಕ್ಕಿಂತ ಹೆಚ್ಚಾಗಿ ಇತರರೊಡನಿದ್ದಾಗ ನಗುವುದು ಸಹಜ. ಇತರರು ನಕ್ಕಾಗ, ಅದರ ಕಾರಣ ತಿಳಿಯದಿದ್ದರೂ ಅವರ ನಗೆಯೇ ಪ್ರಚೋದಕವಾಗಿ ಶ್ರೋತೃಗಳಲ್ಲಿ ನಗು ಮೂಡುತ್ತದೆ. ಯಾವುದಾದರೊಂದು ಸಾಮಾಜಿಕ ಅಥವಾ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗಿಗಳಾದ ಪ್ರೇಕ್ಷಕ ಅಥವಾ ಶ್ರೋತೃ ವರ್ಗದವರೆಲ್ಲರೂ ಪರಸ್ಪರ ಪರಿಚಯಸ್ಥರಲ್ಲದಿದ್ದರೂ ಎಲ್ಲರೂ ಒಂದೇ ಕಾರಣಕ್ಕಾಗಿ ನಕ್ಕಾಗ ಅವರಲ್ಲಿ ತಾವೆಲ್ಲರೂ ತಾತ್ಕಾಲಿಕವಾಗಿ ಒಂದು ಗುಂಪಿಗೆ ಸೇರಿದವರೆಂಬ ಭಾವನೆ ಮೊಳೆಯುತ್ತದೆ. ಈ ಅಂಶವನ್ನು ಪೂರ್ಣವಾಗಿ ಮನಗಂಡಿರುವವರು ವಾಗ್ಮಿಗಳು ಮತ್ತು ಭಾಷಣಕಾರರು. ಇವರು ತಮ್ಮ ಭಾಷಣದಲ್ಲಿನ ಮುಖ್ಯ ಅಂಶವನ್ನು ಹೊರಗೆಡಹುವ ಮುನ್ನವೇ ಯಾವುದಾದರೊಂದು ಕಾರಣದಿಂದ ಶ್ರೋತೃಗಳನ್ನೆಲ್ಲ ನಗೆಯ ಕಡಲಿನಲ್ಲಿ ತೇಲಿಸುವುದರ ಮೂಲಕ ಅವರ ಬೇಸರ, ದುಃಖ, ವಿಮನಸ್ಕತೆ ಮುಂತಾದವನ್ನು ತಾತ್ಕಾಲಿಕವಾಗಿಯಾದರೂ ದೂರೀಕರಿಸಿ ತಮ್ಮ ಭಾಷಣದತ್ತ ಅವರ ಗಮನವನ್ನು ಕೇಂದ್ರೀಕರಿಸುವಂತೆ ಮಾಡುತ್ತಾರೆ.	
(ಕೆ.ಎಸ್‍ಎಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ